ನಾಬ್ಲಾಕ್, ಎಡ್ವರ್ಡ್
1874-1945. ನಾಟಕಕಾರ ಮತ್ತು ಕಾದಂಬರಿಕಾರ. ಜರ್ಮನ್ ತಳಿಯವ. ಹುಟ್ಟಿದ್ದು ನ್ಯೂಯಾರ್ಕ ನಗರದಲ್ಲಿ. ಹಾರ್ವರ್ಡ ಕಾಲೇಜಿನಿಂದ ಪದವೀಧರನಾದ(1896). ಅಲ್ಲಿದ್ದಾಗ ನಾಟಕಗಳ ಅಭ್ಯಾಸ ಮಾಡಿದ. ಅನಂತರ ಲಂಡನ್ನಿಗೆ ತೆರಳಿ ಸ್ವತಃ ನಾಟಕಗಳನ್ನು ಬರೆದು ಇಲ್ಲವೆ ರೂಪಾಂತರ ಮಾಡಿ ಭಾಷಾಂತರಿಸಿ ರಂಗಭೂಮಿ ಅನುಭವ ಪಡೆದ. 1906ರಲ್ಲಿ ಇವನ ದಿ ಶುಲಮೈಟ್ ಎನ್ನುವ ರೂಪಾಂತರ ಸೆವಾಯ್ ನಾಟಕಗೃಹದಲ್ಲಿ ಅಭಿನಯಿಸಲ್ಪಟ್ಟಿತು. ಮರು ವರ್ಷ ಒಂದು ನಾಟಕಗೃಹದಲ್ಲಿ ನಾಟಕಗಳ ಓದುಗನಾದ. ಸ್ಥಳಿಕ ಆಚಾರ ಪದ್ದತಿಗಳ ಅಭ್ಯಾಸಕ್ಕಾಗಿ ಟ್ಯೂನಿಸ್ ಕೈರವಾನ್‍ಗಳಲ್ಲಿ ಸಂಚಾರಮಾಡಿ ಕಿಸ್ಮತ್ ಎಂಬ ನಾಟಕವನ್ನು ಬರೆದ. ಅದು ಗ್ಯಾರಿಕ್ ನಾಟಕಗೃಹದಲ್ಲಿ ಅಭಿನಯಿಸಲ್ಪಟ್ಟು(1911) ಯಶಸ್ವಿಯಾಯಿತು. ಅರ್ನಾಲ್ಡ್ ಬೆನೆಟ್‍ನೊಡನೆ ಸಹಕರಿಸಿ ಮೈಲ್‍ಸ್ಟೋನ್ ಎಂಬ ಕುಟುಂಬವೊಂದರ ಮೂರು ಸಂತತಿಗಳಿಗೆ ಸಂಬಂಧಿಸಿದ ಹರ್ಷನಾಟಕ ಹೊರತಂದ(1912). ಅದು ಆ ಕಾಲದ ಪ್ರಸಿದ್ದ ನಾಟಕಗಳಲ್ಲೊಂದಾಯಿತು. ಇಂಗ್ಲೆಂಡಿನ ಪ್ರಜೆಯಾಗಿ (1916)ನಾಬ್ಲಾಚ್ ಎಂದಿದ್ದ ತನ್ನ ಹೆಸರನ್ನು ನಾಬ್ಲಾಕ್ ಎಂದು ಬದಲಾಯಿಸಿದ. ಒಂದನೆಯ ಮಹಾಯುದ್ದದ ಕಾಲದಲ್ಲಿ ಇಂಗ್ಲೆಂಡಿನಲ್ಲಿದ್ದ ಫ್ರೆಂಚರ ಸೇವೆಯಲ್ಲಿ ನಿರತನಾದ. ನಾಲ್ಕು ದಶಕಗಳಲ್ಲಿ ಸುಮಾರು ವರ್ಷಕ್ಕೊಂದರಂತೆ ಅನೇಕ ನಾಟಕಗಳನ್ನು ರೂಪಾಂತರಗಳನ್ನು ರಚಿಸಿದ. ಮೈ ಲೇಡಿಸ್ ಡ್ರೆಸ್ (1914) ಎನ್ನುವ ನಾಟಕವನ್ನು ಇವನ ಅತ್ಯುತ್ತಮ ಕೃತಿಯೆಂದು ಎಣಿಸುವವರಿದ್ದಾರೆ. ಹೊರಬಿದ್ದ ಮೇರಿ ಓಡೈಲ್(1915) ಎಂಬ ಕೃತಿ ಅದನ್ನು ಮೀರಿದೆಯೆಂದು ಹೇಳುವವರೂ ಇದ್ದಾರೆ. ದಿ ಲಲಬಿ (1923), ದಿ ಮಲ್ಬೆರಿ ಬುಷ್(1930) ರೋಲಿಂಗ್ ಸ್ಟೋನ್ (1936) ಮತ್ತು ಬರ್ಡ ಆಫ್ ಪ್ಯಾಸೇಜ್(1943)ಇವು ಇವನ ಇತರ ಕೃತಿಗಳು. ಈತ ರಂಗಭೂಮಿಗಾಗಿ ವಿಕಿಬಾಮ್‍ನ ಗ್ರ್ಯಾಂಡ್ ಹೊತೆಲ್(1931), ಎ.ಜೆ.ಕ್ರಾನಿನ್‍ನ ಹ್ಯಾರ್ಟಸ್ ಕ್ಯಾಸಲ್(1932) ಮತ್ತು ವಿ. ಸ್ಯಾಕ್‍ವಿಲ್ ವೆಸ್ಟಳ ದಿ ಎಡ್ವರ್ಡಿಯನ್(1934)ಎಂಬ ಪ್ರಸಿದ್ದ ಕಾದಂಬರಿಗಳನ್ನು ರೂಪಾಂತರಮಾಡಿದ. ಲಂಡನ್ ಲೈಫ್ (1924) ಎನ್ನುವ ನಾಟಕ ರಚನೆಯಲ್ಲಿ ಅರ್ನಾಲ್ಡ್ ಬೆನೆಟ್‍ನೊಡನೆ ಸಹಕರಿಸಿದ.  ಜೆ.ಬಿ.ಪ್ರೀಸ್ಟ್ಲಿಯೊಡನೆ ಸಹಕರಿಸಿ ಅವನ ದಿ ಗುಡ್ ಕಂಪ್ಯಾನಿಯನ್ಸ್ ಎನ್ನುವ ಕೃತಿಯನ್ನು ನಾಟಕವಾಗಿ ಪರಿವರ್ತಿಸಿದ(1931). ಆ್ಯಂಟ್ ಹೀಪ್(1929), ದಿ ಮ್ಯಾನ್ ವಿತ್ ಟು ಮಿರರ್ಸ್(1931), ಲವ್ ಲೇಡಿ(1933) ಮತ್ತು ಇನ್‍ಎಕ್ಸ್‍ಪಿರಿಯನ್ಸ್(1941)ಇವು ಇವನ ಕಾದಂಬರಿಗಳು. 1939ರಲ್ಲಿ ರೌಂಡ್ ದಿ ರೋಮ್ ಎನ್ನುವ ಇವನ ಆತ್ಮ ವೃತ್ತಾಂತ ಪ್ರಕಟವಾಯಿತು.						
		(ಜಿ.ಕೆ.ಯು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ